ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಪಾಸ್‌ಪೋರ್ಟ್‌ ನಲ್ಲಿ ಹೆಸರು ಹಾಗೂ ವಿಳಾಸವನ್ನು ಬದಲಾಯಿಸುವುದು ಹೇಗೆ?

(ಮೂಲ: thequint)

ನಿಮ್ಮ ಹೆಸರು ಮತ್ತು ವಿಳಾಸ ಸೇರಿದಂತೆ ಹಲವಾರು ಪ್ರಮುಖ ವಿವರಗಳನ್ನು ಪಾಸ್‌ಪೋರ್ಟ್ ಒಳಗೊಂಡಿರುತ್ತದೆ.  ಆದ್ದರಿಂದ, ನೀವು ಇತ್ತೀಚೆಗೆ ಸ್ಥಳಾಂತರಗೊಂಡಿದ್ದು, ನಿಮ್ಮ ಪಾಸ್‌ಪೋರ್ಟ್ ಹಳೆಯ ವಿಳಾಸವನ್ನೇ ಸೂಚಿಸುತ್ತಿದ್ದರೆ, ನೀವು ಅದನ್ನು ನವೀಕರಿಸಬೇಕಾಗುತ್ತದೆ.  ಅದೇ ರೀತಿ, ಪಾಸ್‌ಪೋರ್ಟ್‌ನಲ್ಲಿ ನಿಮ್ಮ ಹೆಸರು ತಪ್ಪಾಗಿದ್ದಲ್ಲಿ, ಅದನ್ನು ಶೀಘ್ರವಾಗಿ ನವೀಕರಿಸಬೇಕಾಗುತ್ತದೆ.

ಆದ್ದರಿಂದ, ಈ ಲೇಖನವು ಪಾಸ್‌ಪೋರ್ಟ್‌ನಲ್ಲಿ ನಿಮ್ಮ ಹೆಸರನ್ನು ಬದಲಾಯಿಸುವ ಪ್ರಕ್ರಿಯೆಯನ್ನು ವಿವರಿಸಲಿದೆ.  ಜೊತೆಗೆ, ಪಾಸ್‌ಪೋರ್ಟ್‌ನಲ್ಲಿ ವಿಳಾಸವನ್ನು ಬದಲಾಯಿಸುವುದು ಹೇಗೆ? ಎಂಬುದರ ಕುರಿತು ಇದು ನಿಮಗೆ ಮಾರ್ಗದರ್ಶನ ನೀಡಲಿದೆ.

ಪ್ರಾರಂಭಿಸೋಣ! 

ಪಾಸ್‌ಪೋರ್ಟ್‌ನಲ್ಲಿ ಹೆಸರನ್ನು ಬದಲಾಯಿಸುವುದು ಹೇಗೆ?

ತಪ್ಪಾದ ಹೆಸರನ್ನು ಸರಿಪಡಿಸಲು ಅಥವಾ ಪಾಸ್‌ಪೋರ್ಟ್‌ನಲ್ಲಿ ಅವರ ಸರ್ ನೇಮ್  ಬದಲಾಯಿಸಲು ಬಯಸುವ ವ್ಯಕ್ತಿಯು ಮರುಹಂಚಿಕೆಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್ ಮರುಹಂಚಿಕೆಗಾಗಿ ಫಾರ್ಮ್ ಅನ್ನು ಭರ್ತಿ ಮಾಡುವ ಮತ್ತು ಸಲ್ಲಿಸುವ ಹಂತಗಳು ಹೀಗಿವೆ:- 

  •  ಪಾಸ್‌ಪೋರ್ಟ್ ಸೇವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು 'ರಿಜಿಸ್ಟರ್ ಮಾಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಾಯಿತ ID ಯೊಂದಿಗೆ ಲಾಗ್ ಇನ್ ಆಗಿ ಮತ್ತು 'ಹೊಸ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿ/ಪಾಸ್‌ಪೋರ್ಟ್‌ನ ಮರುಹಂಚಿಕೆ' ಆಯ್ಕೆಯನ್ನು ಆರಿಸಿ.
  • ಸಂಬಂಧಿತ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ. 
  • ಪಾವತಿಸಲು ಮತ್ತು ಅಪಾಯಿಂಟ್‌ಮೆಂಟ್ ನಿಗದಿಪಡಿಸಲು ನಿಮ್ಮ ಸ್ಕ್ರೀನ್ ಮೇಲಿನ ಲಿಂಕ್ ಅನ್ನು ಕ್ಲಿಕ್ ಮಾಡಿ.  ಇದಲ್ಲದೆ, ನಿಮ್ಮ ಹತ್ತಿರದ ಪ್ರಾದೇಶಿಕ ಪಾಸ್‌ಪೋರ್ಟ್ ಕಛೇರಿ (ಆರ್.ಪಿ.ಒ ) ಅಥವಾ ಪಾಸ್‌ಪೋರ್ಟ್ ಸೇವಾ ಕೇಂದ್ರ (ಪಿ.ಎಸ್.ಕೆ)ನಲ್ಲಿ  ಅಪಾಯಿಂಟ್‌ಮೆಂಟ್ ನಿಗದಿಪಡಿಸಲು ನೀವು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ.
  • ಈಗ, ನಿಮ್ಮ ಅಪ್ಲಿಕೇಶನ್  ರೆಫರೆನ್ಸ್ ಸಂಖ್ಯೆ ಅಥವಾ ARN ಅನ್ನು ಒಳಗೊಂಡಿರುವ ಚಲನ್ ಪಡೆಯಲು ‘ಪ್ರಿಂಟ್ ಅಪ್ಲಿಕೇಶನ್ ರಿಸೀಪ್ಟ್’ ಆಯ್ಕೆಮಾಡಿ. ಅಪ್ಲಿಕೇಶನ್ ಸಲ್ಲಿಸಿದ ನಂತರ, ನಿಗದಿಪಡಿಸಿದ ದಿನಾಂಕದಂದು ವೆರಿಫಿಕೇಶನ್ ಗಾಗಿ ಒರಿಜಿನಲ್ ಡಾಕ್ಯುಮೆಂಟುಗಳೊಂದಿಗೆ ಹತ್ತಿರದ ಪಾಸ್‌ಪೋರ್ಟ್ ಕಚೇರಿಗೆ ಭೇಟಿ ನೀಡಿ.

ಪರ್ಯಾಯವಾಗಿ, ನೀವು ಇ-ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ, ಅದನ್ನು ಭರ್ತಿ ಮಾಡಬಹುದು. ನಂತರ, 'ವ್ಯಾಲಿಡೇಟ್' ಕ್ಲಿಕ್ ಮಾಡಿ ಮತ್ತು ಫೈಲ್ ಅನ್ನು ಉಳಿಸಿ. ನಂತರ, ಮೇಲೆ ತಿಳಿಸಿದ ಹಂತಗಳನ್ನು ಅನುಸರಿಸಿ ಮತ್ತು ಪಾಸ್‌ಪೋರ್ಟ್ ಕಚೇರಿಯಲ್ಲಿ ಅಪಾಯಿಂಟ್‌ಮೆಂಟ್ ಬುಕ್ ಮಾಡಲು ಈ XML ಫೈಲ್ ಅನ್ನು ಅಪ್‌ಲೋಡ್ ಮಾಡಿ. 

ಪಾಸ್‌ಪೋರ್ಟ್‌ನಲ್ಲಿ ಹೆಸರನ್ನು ಬದಲಾಯಿಸಲು ಅಗತ್ಯವಾಗಿ ಸಲ್ಲಿಸಬೇಕಾದ ಡಾಕ್ಯುಮೆಂಟುಗಳು ಯಾವುವು?

ಅಗತ್ಯವಾಗಿ ಸಲ್ಲಿಸಬೇಕಾದ ಡಾಕ್ಯುಮೆಂಟುಗಳ ಪಟ್ಟಿ ಇಲ್ಲಿದೆ:

  • ಮದುವೆ ಪ್ರಮಾಣಪತ್ರ (ಒರಿಜಿನಲ್ ಮತ್ತು ಫೋಟೊಕಾಪಿ)  

  • ನಿಮ್ಮ ಸಂಗಾತಿಯ ಪಾಸ್‌ಪೋರ್ಟ್‌ನ ಸೆಲ್ಫ್ -ಅಟೆಸ್ಟೆಡ್ ಫೋಟೊಕಾಪಿ.

  • ಪ್ರಸ್ತುತ ವಿಳಾಸದ ಪುರಾವೆ

  • ಹಳೆಯ ಪಾಸ್‌ಪೋರ್ಟ್ ನ ಮೊದಲ ಮತ್ತು ಕೊನೆಯ ಎರಡು ಪುಟಗಳ ಸೆಲ್ಫ್ -ಅಟೆಸ್ಟ್ ಮಾಡಿದ  ಫೋಟೊಕಾಪಿ. ಇದು ಇಸಿಆರ್/ನಾನ್ ಇಸಿಆರ್ ಪುಟವನ್ನೂ ಒಳಗೊಂಡಿರಬೇಕು.

  • ಹಳೆಯ ಪಾಸ್‌ಪೋರ್ಟ್ ವ್ಯಾಲಿಡಿಟಿ ವಿಸ್ತರಣೆ ಪುಟ ಮತ್ತು ವೀಕ್ಷಣಾ ಪುಟ ಯಾವುದಾದರೂ ಇದ್ದಲ್ಲಿ ಅದನ್ನೂ ಒಳಗೊಂಡಿರಬೇಕು.

ಗಮನಿಸಿ: ವಿಚ್ಛೇದಿತರು, ಅವನು/ಅವಳು ತಮ್ಮ ಪಾಸ್‌ಪೋರ್ಟ್‌ನಲ್ಲಿ ಸರ್ ನೇಮ್ ಬದಲಾಯಿಸಲು ನ್ಯಾಯಾಲಯದಿಂದ ಪ್ರಮಾಣೀಕರಿಸಿದ ವಿಚ್ಛೇದನದ ತೀರ್ಪು ಅಥವಾ ವಿಚ್ಛೇದನ ಪ್ರಮಾಣಪತ್ರದ (ಸೆಲ್ಫ್-ಅಟೆಸ್ಟ್ ಮಾಡಿದ) ಪ್ರತಿಯನ್ನು ಸಲ್ಲಿಸುವ ಅಗತ್ಯವಿದೆ.

ನಾವು ಪಾಸ್‌ಪೋರ್ಟ್‌ನಲ್ಲಿ ಹೆಸರು ಬದಲಾವಣೆಗೆ ಅಗತ್ಯವಿರುವ ಹಂತಗಳು ಮತ್ತು ಡಾಕ್ಯುಮೆಂಟುಗಳನ್ನು ತಿಳಿದುಕೊಂಡೆವು.  ಈಗ ಪಾಸ್‌ಪೋರ್ಟ್‌ನಲ್ಲಿ ವಿಳಾಸವನ್ನು ಬದಲಾಯಿಸುವ ಪ್ರಕ್ರಿಯೆಯ ಬಗ್ಗೆ ತಿಳಿಯೋಣ.

ಪಾಸ್‌ಪೋರ್ಟ್‌ನಲ್ಲಿ ವಿಳಾಸವನ್ನು ಬದಲಾಯಿಸುವುದು ಹೇಗೆ?

ಆನ್‌ಲೈನ್‌ನಲ್ಲಿ ವಿಳಾಸವನ್ನು ಬದಲಾಯಿಸುವ ಹಂತಗಳು ಈ ಕೆಳಗಿನಂತಿವೆ-

  •  ಅಧಿಕೃತ ಪಾಸ್‌ಪೋರ್ಟ್ ಸೇವಾ ವೆಬ್‌ಸೈಟ್‌ಗೆ ಭೇಟಿ ನೀಡಿ. ಇಲ್ಲಿ, ನೋಂದಾಯಿತ ಬಳಕೆದಾರರು ತಮ್ಮ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ತಮ್ಮ ಖಾತೆಗಳಿಗೆ ಲಾಗ್ ಇನ್ ಆಗಬಹುದು.  ಆದರೆ ಹೊಸ ಬಳಕೆದಾರರು ಹೊಸ ಖಾತೆಯನ್ನು ರಚಿಸಬೇಕಾಗುತ್ತದೆ. 
  • ನಿಮ್ಮ ಖಾತೆಗೆ ಲಾಗ್ ಇನ್ ಆದ ನಂತರ, ಹತ್ತಿರದ ಪಾಸ್‌ಪೋರ್ಟ್ ಕಚೇರಿಯನ್ನು ಆಯ್ಕೆ ಮಾಡಿ.  ಈ ಹಂತದಲ್ಲಿ, ಪೋರ್ಟಲ್ ನಲ್ಲಿ ನಿಮ್ಮ ಹೆಸರು ಮತ್ತು ಜನ್ಮ ದಿನಾಂಕದಂತಹ ಕೆಲವು ವಿವರಗಳನ್ನು ನಮೂದಿಸಬೇಕಾಗುತ್ತದೆ.
  • ನಂತರ, ನಿಮ್ಮ ನೋಂದಾಯಿತ ಇಮೇಲ್ ಖಾತೆಯ ಮೂಲಕ ನೀವು ಸಕ್ರಿಯಗೊಳಿಸಬೇಕಾದ ಲಿಂಕ್ ಅನ್ನು ಸ್ವೀಕರಿಸುತ್ತೀರಿ. ಈ ಲಿಂಕ್ ಅನ್ನು ಕ್ಲಿಕ್ ಮಾಡಿ.  ನಂತರ 'ಹೊಸ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿ/ಪಾಸ್‌ಪೋರ್ಟ್‌ನ ಮರುಹಂಚಿಕೆ' ಅನ್ನು ಆಯ್ಕೆಮಾಡಿ.

ಮೊದಲೇ ಚರ್ಚಿಸಿದಂತೆ, ಒಬ್ಬ ವ್ಯಕ್ತಿಯು ಹತ್ತಿರದ ಪಾಸ್‌ಪೋರ್ಟ್ ಕಚೇರಿಯೊಂದಿಗೆ ಅಪಾಯಿಂಟ್‌ಮೆಂಟ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ. ನಂತರ ಪಿಡಿಎಫ್ ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಿ, ನವೀಕರಿಸಿದ ವಿಳಾಸದ ವಿವರಗಳೊಂದಿಗೆ ಸಲ್ಲಿಸಬೇಕಾಗುತ್ತದೆ. ಈ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ, ಆಫ್‌ಲೈನ್‌ನಲ್ಲಿ ಭರ್ತಿ ಮಾಡಬಹುದು ಎಂಬುದನ್ನು ಗಮನಿಸಿ.  ಈ ಪ್ರಕ್ರಿಯೆ ಮುಗಿದ ನಂತರ, ಡೌನ್‌ಲೋಡ್ ಮಾಡಿದ ಅದೇ ಪುಟದಲ್ಲಿ ಅದನ್ನು ಅಪ್‌ಲೋಡ್ ಮಾಡಬಹುದು.

ಪಾಸ್‌ಪೋರ್ಟ್‌ನಲ್ಲಿ ವಿಳಾಸವನ್ನು ಬದಲಾಯಿಸಲು ಅಗತ್ಯವಿರುವ ಡಾಕ್ಯುಮೆಂಟುಗಳು ಯಾವುವು?

ಪಾಸ್‌ಪೋರ್ಟ್‌ನಲ್ಲಿ ವಿಳಾಸ ಬದಲಾವಣೆಗಾಗಿ ಅಗತ್ಯವಿರುವ ಡಾಕ್ಯುಮೆಂಟುಗಳ ಪಟ್ಟಿಯನ್ನುಈ ಕೆಳಗೆ ನೀಡಲಾಗಿದೆ:

  • ಒರಿಜಿನಲ್ ಪಾಸ್‌ಪೋರ್ಟ್‌

  • ನಿಮ್ಮ ಆನ್‌ಲೈನ್ ಅಪ್ಲಿಕೇಶನ್ ಪ್ರತಿ

  • ಚಲನ್ ನಕಲು ಅಥವಾ ಪಾವತಿ ರಸೀದಿ

  • ಪ್ರಸ್ತುತ ವಿಳಾಸದ ಪುರಾವೆ, ಉದಾಹರಣೆಗೆ ಆಧಾರ್ ಕಾರ್ಡ್, ವಿದ್ಯುತ್ ಬಿಲ್, ನೀರಿನ ಬಿಲ್, ಮತದಾರರ ಗುರುತಿನ ಚೀಟಿ, ಇತ್ಯಾದಿ.

  • ಪಾಸ್‌ಪೋರ್ಟ್ ನೀಡುವ ಪ್ರಾಧಿಕಾರ ನಡೆಸಿದ ವೀಕ್ಷಣಾ ಪುಟದ ಪ್ರತಿ (ಸೆಲ್ಫ್ ಅಟೆಸ್ಟ್ ಮಾಡಿದ್ದು)

  • ಸಂಗಾತಿಯ ಪಾಸ್‌ಪೋರ್ಟ್ (ಅರ್ಜಿದಾರರ ಪ್ರಸ್ತುತ ವಿಳಾಸವು ಸಂಗಾತಿಯ ಪಾಸ್‌ಪೋರ್ಟ್‌ನಲ್ಲಿರುವ ವಿಳಾಸದಂತೆಯೇ ಇರಬೇಕು)

ಮೇಲೆ ತಿಳಿಸಿದಂತೆ, ಹೆಸರು ಅಥವಾ ವಿಳಾಸ ಬದಲಾವಣೆಗೆ ಶುಲ್ಕ ಅನ್ವಯಗೊಳ್ಳಲಿದೆ.  ಅದನ್ನು ನಾವೀಗ ಚರ್ಚಿಸಲಿದ್ದೇವೆ. 

ಪಾಸ್‌ಪೋರ್ಟ್‌ನಲ್ಲಿ ಹೆಸರು ಮತ್ತು ವಿಳಾಸವನ್ನು ಬದಲಾಯಿಸಲು ಎಷ್ಟು ವೆಚ್ಚವಾಗುತ್ತದೆ?

ಹೆಸರು ಮತ್ತು ವಿಳಾಸ ಸೇರಿದಂತೆ ವೈಯಕ್ತಿಕ ವಿವರಗಳಲ್ಲಿ ಬದಲಾವಣೆಯಾಗಿದ್ದರೆ, ಅಸ್ತಿತ್ವದಲ್ಲಿರುವ ಪಾಸ್‌ಪೋರ್ಟ್‌ನ ಮರು-ಹಂಚಿಕೆಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

10 ವರ್ಷಗಳ ವ್ಯಾಲಿಡಿಟಿಯೊಂದಿಗೆ ಪಾಸ್‌ಪೋರ್ಟ್‌ನ ಮರುಹಂಚಿಕೆಗೆ (ವೀಸಾ ಪುಟಗಳು ಖಾಲಿಯಾದ ಕಾರಣ ಹೆಚ್ಚುವರಿ ಬುಕ್‌ಲೆಟ್ ಸೇರಿದಂತೆ) ಅಪ್ಲಿಕೇಶನ್ ಶುಲ್ಕ ₹2000 (60 ಪುಟಗಳಿಗೆ) ಮತ್ತು ₹1500 (36 ಪುಟಗಳಿಗೆ). ತತ್ಕಾಲ್ ಸೇವೆಗಳ ಸಂದರ್ಭದಲ್ಲಿ, ಒಬ್ಬ ವ್ಯಕ್ತಿಯು ಹೆಚ್ಚುವರಿಯಾಗಿ ₹ 2000 ಪಾವತಿಸಬೇಕಾಗುತ್ತದೆ.

ಇದಲ್ಲದೆ, ಅಪ್ರಾಪ್ತ ವಯಸ್ಕರಿಗೆ, 5 ವರ್ಷಗಳ ವ್ಯಾಲಿಡಿಟಿಯ ಪಾಸ್‌ಪೋರ್ಟ್ ಮರು-ಹಂಚಿಕೆಗೆ ಅಪ್ಲಿಕೇಶನ್ ಶುಲ್ಕ ₹1000 (36 ಪುಟಗಳಿಗೆ) ಮತ್ತು ಹೆಚ್ಚುವರಿ ತತ್ಕಾಲ್ ಶುಲ್ಕ ₹2000 ಇರುತ್ತದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ವಿಳಾಸ ಬದಲಾವಣೆಯ ಅಪ್ಲಿಕೇಶನ್ ಫಾರ್ಮ್ ಸಲ್ಲಿಸುವಾಗ ಅರ್ಜಿದಾರರು ಹಾಜರಿರುವುದು ಅಗತ್ಯವೇ?

ಇಲ್ಲ, ವಿಳಾಸ ಬದಲಾವಣೆಯ ಅಪ್ಲಿಕೇಶನ್ ಪ್ರಕ್ರಿಯೆಯು ಆನ್‌ಲೈನ್‌ನಲ್ಲಿ ನಡೆಯುತ್ತದೆ.

ಮದುವೆಯ ನಂತರ ಮಹಿಳೆಯರು ತಮ್ಮ ಹೆಸರನ್ನು ಪಾಸ್‌ಪೋರ್ಟ್‌ನಲ್ಲಿ ಬದಲಾಯಿಸುವುದು ಕಡ್ಡಾಯವೇ?

ಇಲ್ಲ, ಮದುವೆಯ ನಂತರ ಮಹಿಳೆಯರು ಪಾಸ್‌ಪೋರ್ಟ್‌ನಲ್ಲಿ ತಮ್ಮ ಹೆಸರನ್ನು ಕಡ್ಡಾಯವಾಗಿ ಬದಲಾಯಿಸುವ ಅಗತ್ಯವಿಲ್ಲ.  ಅಂತಹ ಬದಲಾವಣೆಗಳನ್ನು ಮಾಡುವುದು ಅರ್ಜಿದಾರರ ಆಯ್ಕೆಯಾಗಿರುತ್ತದೆ.