ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ವೈಯಕ್ತಿಕ ಸಾಲಕ್ಕೆ ಎಷ್ಟು ಸಿಬಿಲ್ ಸ್ಕೋರ್ ನ ಅಗತ್ಯವಿದೆ?

'ಎಲ್ಲಾ ಉದ್ದೇಶದ ಸಾಲ' ಎಂದೂ ಕರೆಯಲ್ಪಡುವ ವೈಯಕ್ತಿಕ ಸಾಲವು(ಪರ್ಸನಲ್ ಲೋನ್) ಒಂದು ಅಸುರಕ್ಷಿತ ಸಾಲವಾಗಿದ್ದು, ಇದನ್ನು ಸಾಲಗಾರರು ಹಲವು ಉದ್ದೇಶಗಳಿಗೆ ಪಡೆಯಬಹುದಾಗಿದೆ (ಉದಾಹರಣೆಗೆ ಮನೆ ಸುಧಾರಣೆ, ಆರೋಗ್ಯಕ್ಕಾಗಿ, ಅಥವಾ ಮದುವೆ ವೆಚ್ಚಗಳಿಗಾಗಿ). ಏಕೆಂದರೆ ಈ ನಿಧಿಯು ಹೇಗೆ ಬಳಕೆಯಾಗಬಹುದು ಎನ್ನುವುದಕ್ಕೆ ಯಾವುದೇ ನಿರ್ಬಂಧನೆಗಳಿರುವುದಿಲ್ಲ.

ಇಂತಹ ಸಾಲಕ್ಕೆ ಅರ್ಹರಾಗಲು, ಕ್ರೆಡಿಟ್ ಸ್ಕೋರ್ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕ್ರೆಡಿಟ್ ಸ್ಕೋರ್ ಒಬ್ಬ ವ್ಯಕ್ತಿಯ "ಕ್ರೆಡಿಟ್ ಅರ್ಹತೆ" ಅಥವಾ ಅವರು ಪಡೆದಿರುವ ಋಣ ಅಥವಾ ಸಾಲವನ್ನು ಮರುಪಾವತಿಸುವ ಅವರ ಸಾಮಥ್ಯವನ್ನು ಪ್ರದರ್ಶಿಸುವ ಒಂದು ಸಂಖ್ಯೆಯಾಗಿದೆ. ಇದನ್ನು ಒಬ್ಬ ವ್ಯಕ್ತಿಯ ಹಣಕಾಸಿನ ಇತಿಹಾಸವನ್ನು ಬಳಸಿ ಭಾರತದ ನಾಲ್ಕು ಕ್ರೆಡಿಟ್ ಬ್ಯುರೋಗಳಿಂದ ಲೆಕ್ಕಾಚಾರ ಮಾಡಲಾಗುತ್ತದೆ– ಟ್ರಾನ್ಸ್ಯೂನಿಯನ್ ಸಿಬಿಲ್, ಎಕ್ಸ್‌ಪೀರಿಯನ್, ಕ್ರಿಫ್ ಹೈಮರ್ಕ್, ಮತ್ತು ಈಕ್ವಿಫ್ಯಾಕ್ಸ್.

ವೈಯಕ್ತಿಕ ಸಾಲಗಳಿಗೆ ನಿಮ್ಮ ಕ್ರೆಡಿಟ್ ಸ್ಕೋರ್ ಏಕೆ ಮುಖ್ಯವಾಗುತ್ತದೆ?

ಮೇಲೆ ತಿಳಿಸಿರುವಂತೆ, ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರ್ (ಜನಪ್ರಿಯವಾಗಿ ಸಿಬಿಲ್ ಸ್ಕೋರ್ ಎಂದು ಕರೆಯಲ್ಪಡುತ್ತದೆ) ಅವರ "ಕ್ರೆಡಿಟ್ ಅರ್ಹತೆ"ಯ ಮೌಲ್ಯಮಾಪಕವಾಗಿದೆ. ಇದನ್ನು ಸಾಮಾನ್ಯವಾಗಿ 300 ಮತ್ತು 900(900 ಗರಿಷ್ಠ ಸಾಧ್ಯವಿರುವ ಸಂಖ್ಯೆಯಾಗಿದೆ) ಮಧ್ಯೆ ಇರುವ ಮೂರು ಅಂಕಿ ಸಂಖ್ಯೆಯಾಗಿ ವ್ಯಕ್ತಪಡಿಸಲಾಗುತ್ತದೆ. ಇದು ನಿಮ್ಮ ಪಾವತಿ ಇತಿಹಾಸ, ಅಸ್ತಿತ್ವದಲ್ಲಿರುವ ಸಾಲ, ಮತ್ತು ನಿಮ್ಮ ಸಾಲದ ಬಳಕೆಯಂತಹ ಅಂಶಗಳನ್ನು ಪರಿಗಣಿಸುತ್ತದೆ. 

ಬ್ಯಾಂಕ್ ಗಳು ಹಾಗೂ ಇತರ ಸಾಲದಾರ ಸಂಸ್ಥೆಗಳು ನಿಮ್ಮ ಸಾಲ ಮರುಪಾವತಿಯ ಸಾಮರ್ಥ್ಯವನ್ನು ನಿರ್ಧರಿಸಲು ನಿಮ್ಮ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಅನ್ನು ನೋಡುತ್ತಾರೆ. ಒಂದು ಒಳ್ಳೆಯ ಅಥವಾ ಉತ್ತಮ ಕ್ರೆಡಿಟ್ ಸ್ಕೋರ್, ನೀವು ಈ ಹಿಂದೆ ನಿಮ್ಮ ಕ್ರೆಡಿಟ್ ಜೊತೆ ಜವಾಬ್ದಾರಿಯುತವಾಗಿ ವರ್ತಿಸಿ, ಹಣಕಾಸಿನ ಸ್ಥಿರತೆಯನ್ನು ಪ್ರದರ್ಶಿಸಿದ್ದೀರಿ ಎಂದು ತೋರಿಸುತ್ತದೆ. 

ಮತ್ತು ವೈಯಕ್ತಿಕ ಸಾಲವು ಒಂದು ರೀತಿಯ ಅಸುರಕ್ಷಿತ ಸಾಲವಾಗಿರುವುದರಿಂದ (ಅಂದರೆ, ಮೆಲಾಧಾರವಿರುವುದಿಲ್ಲ), ಹಾಗೂ ಸಾಲದಾತರಿಗೆ ಹೆಚ್ಚು ಅಪಾಯಕಾರಿಯಾಗಿರುವುದರಿಂದ, ಇಂತಹ ಸಾಲಗಳಿಗೆ ಅನುಮೋದನೆ ನೀಡಲು ಅಥವಾ ತಿರಸ್ಕರಿಸಲು ಅವರು ಈ ಕ್ರೆಡಿಟ್ ಸ್ಕೋರ್ ಅನ್ನು ಬಳಸುತ್ತಾರೆ. ಒಂದು ಉತ್ತಮ ಕ್ರೆಡಿಟ್ ಸ್ಕೋರ್ ಈ ಅನುಮೋದನೆಯನ್ನು ಪಡೆಯಲು ಸಹಾಯಕಾರಿಯಾಗಬಹುದು.

ಸೂಚನೆ: ಸಾಲದಾತರು ಇತರ ಅಂಶಗಳಾದ ನಿಮ್ಮ ಉದ್ಯೋಗ, ವೇತನ, ವಾಸಿಸುವ ನಗರ ಇತ್ಯಾದಿಗಳನ್ನೂ ಪರಿಗಣಿಸುತ್ತಾರೆ.

ವೈಯಕ್ತಿಕ ಸಾಲಕ್ಕಾಗಿ ಒಂದು ಒಳ್ಳೆಯ ಕ್ರೆಡಿಟ್ ಸ್ಕೋರ್ ಎಂದರೆ ಏನು?

ವಿಭಿನ್ನ ಕ್ರೆಡಿಟ್ ಬ್ಯೂರೋಗಳು ಕ್ರೆಡಿಟ್ ಸ್ಕೋರ್ ನ ಲೆಕ್ಕಾಚಾರ ಮಾಡಲು ಭಿನ್ನವಾದ ಸ್ಕೋರಿಂಗ್ ಮಾದರಿಗಳನ್ನು ಬಳಸುತ್ತಾರೆ. ಆದರೆ, ಸಾಮಾನ್ಯವಾಗಿ, 700-750ಕ್ಕಿಂತ ಹೆಚ್ಚಿರುವ ಸ್ಕೋರ್ ಅನ್ನು ಒಳ್ಳೆಯ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ.

ವೈಯಕ್ತಿಕ ಸಾಲವು ಒಂದು ಅಸುರಕ್ಷಿತ ಸಾಲವಾಗಿರುವುದರಿಂದ, ಇದಕ್ಕೆ ಒಂದು ಹೆಚ್ಚಿನ ಮಾದರಿ ಕ್ರೆಡಿಟ್ ಸ್ಕೋರ್ ನ ಅಗತ್ಯವಿರುತ್ತದೆ. ವೈಯಕ್ತಿಕ ಸಾಲಕ್ಕಾಗಿ ಬ್ಯಾಂಕ್ ಗಳು ಬಯಸುವ ಕನಿಷ್ಠ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ 750 ರಿಂದ 900 ಆಗಿದೆ. ನೀವು ಉತ್ತಮ ಸ್ಕೋರ್ ಅನ್ನು ಹೊಂದಿರುವಾಗ, ನಿಮ್ಮ ಸಾಲಗಳು ಶೀಘ್ರ ಅನುಮೋದನೆಯನ್ನು ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ, ಹಾಗೂ ನಿಮಗೆ ಬಡ್ಡಿ ದರಗಳ ಮೇಲೂ ಉತ್ತಮ ಕೊಡುಗೆಗಳು ದೊರೆಯುತ್ತವೆ.

ನಿಮ್ಮ ಸ್ಕೋರ್ ನ ವ್ಯಾಪ್ತಿ 600-700 ಇರುವಾಗಲೂ ನಿಮಗೆ ಈ ಸಾಲ ದೊರೆಯುವುದಾದರೂ, ನಿಮಗೆ ಹೆಚ್ಚಿನ ಬಡ್ಡಿ ದರ ಹಾಗೂ ಇತರ ಸಮಸ್ಯೆಗಳು ಎದುರಾಗಬಹುದು. ಇದಕ್ಕಿಂತ ಕಡಿಮೆ ಸ್ಕೋರ್ ಅನ್ನು ಬಹುತೇಕವಾಗಿ ವೈಯಕ್ತಿಕ ಸಾಲಗಳಿಗಾಗಿ ಅತೀ ಕಡಿಮೆ ಎಂದು ಪರಿಗಣಿಸಲಾಗುವುದು.

ನೀವು ಕಡಿಮೆ ಕ್ರೆಡಿಟ್ ಸ್ಕೋರ್ ನೊಂದಿಗೆ ವೈಯಕ್ತಿಕ ಸಾಲವನ್ನು ಹೇಗೆ ಪಡೆಯಬಹುದು?

ನೀವು ಕಡಿಮೆ ಅಥವಾ ಕಳಪೆ ಕ್ರೆಡಿಟ್ ಸ್ಕೋರ್ (ಉದಾಹರಣೆಗೆ, 600ಕ್ಕಿಂತ ಕಡಿಮೆ) ಅನ್ನು ಹೊಂದಿದ್ದರೂ ಸಹ ವೈಯಕ್ತಿಕ ಸಾಲ ಪಡೆಯಲು ಸಾಧ್ಯವಿದೆ. ಸಾಮಾನ್ಯವಾಗಿ, ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಲು ಪ್ರಯತ್ನಿಸುವುದು ಸೂಕ್ತವಾಗಿರುತ್ತದೆ. ಆದರೆ, ನಿಮ್ಮಿಂದ ಇದು ಸಾಧ್ಯವಾಗದೆ ಇದ್ದಲ್ಲಿ, ನೀವು ಇವುಗಳಲ್ಲಿ ಒಂದನ್ನು ಮಾಡಬಹುದಾಗಿದೆ:

  • ಒಬ್ಬ ಸಹ-ಅರ್ಜಿದಾರ/ಗ್ಯಾರೆಂಟರ್ ಅನ್ನು ಹುಡುಕಿರಿ: ಒಬ್ಬ ಸಹ-ಅರ್ಜಿದಾರ/ಗ್ಯಾರೆಂಟರ್ ನೊಂದಿಗೆ ಸಾಲಕ್ಕೆ ಅರ್ಜಿ ಸಲ್ಲಿಸಿ, ಉದಾಹರಣೆಗೆ ಒಂದು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ಒಬ್ಬ ನಿಕಟ ಕುಟುಂಬ ಸದಸ್ಯ. ಇದರಿಂದ ನಿಮ್ಮ ಅರ್ಹತೆ ಹೆಚ್ಚಾಗಬಹುದು.

  • ಒಂದು ಸ್ಥಿರ ಆದಾಯ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಇರುವುದನ್ನು ಸಾಬೀತುಪಡಿಸಿ: ಒಂದು ಸ್ಥಿರ ಆದಾಯ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಇರುವುದರಿಂದ ನೀವು ಸಾಲದ ಮರುಪಾವತಿಗೆ ಸಮರ್ಥರೆಂದು ಸಾಲದಾತರಿಗೆ ಖಚಿತವಾಗುತ್ತದೆ.

  • ಬೇರೆ ಸಾಲದಾತರನ್ನು ಹುಡುಕಿ: ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಹೆಚ್ಚಿನ ಬಡ್ಡಿ ದರದಲ್ಲಿ ಸಾಲವನ್ನು ನೀಡಬಲ್ಲ ಬೇರೆ ಸಾಲದಾತರನ್ನು ಹುಡುಕಿ.

  • ಸಾಲದ ಮೊತ್ತವನ್ನು ಕಡಿಮೆ ಮಾಡಿ: ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ಒಳ್ಳೆಯದಾಗಿದ್ದು ಆದರೆ ಉತ್ತಮವಾಗದೆ ಇದ್ದಲ್ಲಿ (ಉದಾಹರಣೆಗೆ, 600 ಕ್ಕಿಂತ ಹೆಚ್ಚು), ಕಡಿಮೆ ಸಾಲದ ಮೊತ್ತವನ್ನು ಆಯ್ಕೆ ಮಾಡಿ, ಇದರಿಂದ ಸಾಲದಾತರಿಗೆ ಅಪಾಯ ಕಡಿಮೆಯಾಗುತ್ತದೆ.

ಸಾಲದ ಅನುಮೋದನೆಯು ಸಾಮಾನ್ಯವಾಗಿ ಇತರ ಹಲವು ಅಂಶಗಳ ಮೇಲೂ ಆಧರಿತವಾಗಿದೆ, ಹಾಗೂ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಈ ವಿಧಾನಗಳು ಕೂಡಾ ಅನುಮೋದನೆಯನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ದಯವಿಟ್ಟು ಗಮನಿಸಿ.

ಹೀಗಾಗಿ, ವೈಯಕ್ತಿಕ ಸಾಲವು ಯಾವುದೇ ಮೇಲಾಧಾರದ ಅಗತ್ಯವಿರದ ಒಂದು ಅಸುರಕ್ಷಿತ ಸಾಲವಾಗಿರುವುದರಿಂದ, ನಿಮ್ಮ ಸಾಲ ಮರುಪಾವತಿಯ ಸಾಮರ್ಥ್ಯವನ್ನು ಅಳೆಯಲು ಸಾಲದಾತರು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನೋಡುತ್ತಾರೆ. ಇತರ ಕ್ರೆಡಿಟ್ ಬ್ಯೂರೋಗಳು ನೀಡುವ ನಿಮ್ಮ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಸಾಲದಾತರಿಗೆ ನಿಮ್ಮ ಬೇಪಾವತಿಯ ಅಪಾಯವನ್ನು ಪರಿಶೀಲಿಸಲು ಸಹಾಯ ಮಾಡಬಹುದು.

ಆದ್ದರಿಂದ, ಒಂದು ಉತ್ತಮ ಸ್ಕೋರ್ ಅನ್ನು ಹೊಂದಿರುವುದು, ನೀವು ಒಂದು ಹೊಣೆಗಾರ ಸಾಲಗಾರನಾಗಿದ್ದು ನಿಮ್ಮ ಇಎಂಐ ಗಳನ್ನು ಸಮಯದಲ್ಲಿ ಪಾವತಿಸಿರುವಿರಿ ಎಂದು ತೋರಿಸುತ್ತದೆ. ಇದರಿಂದ ನಿಮ್ಮ ಸಾಲದ ಅಪ್ಲಿಕೇಶನ್ ಗಳು ಅನುಮೋದಿತವಾಗುತ್ತವೆ ಎಂದು ನೀವು ಖಚಿತಪಡಿಸಿಕೊಳ್ಳಬಹುದು, ಹಾಗೂ ಕಡಿಮೆ ಸ್ಕೋರ್ ಸಾಲದ ಬೇಪಾವತಿಯ ಹೆಚ್ಚಿನ ಅಪಾಯವನ್ನು ಸೂಚಿಸುವುದರಿಂದ ನಿಮ್ಮ ಅಪ್ಲಿಕೇಶನ್ ಅಸ್ವೀಕಾರವಾಗಬಹುದು.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಒಳ್ಳೆಯ ಕ್ರೆಡಿಟ್ ಸ್ಕೋರ್ ಎಂದರೇನು?

ಸಾಮಾನ್ಯವಾಗಿ, ಕ್ರೆಡಿಟ್ ಸ್ಕೋರ್ ವ್ಯಾಪ್ತಿಗಳು ಈ ರೀತಿ ಇವೆ:

  • 300-579 - ಕಳಪೆ
  • 580-669 – ಸಾಧಾರಣ 
  • 670-739 – ಒಳ್ಳೆಯ
  • 740-799 – ಉತ್ತಮ
  • 800-900 – ಅತ್ಯುತ್ತಮ

ಸಾಮಾನ್ಯವಾಗಿ 700-750 ರ ಕ್ರೆಡಿಟ್ ಸ್ಕೋರ್ ಅನ್ನು ಒಳ್ಳೆಯ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ ಲೆಕ್ಕಾಚಾರ ಮಾಡುವಾಗ ವಿಭಿನ್ನ ಕ್ರೆಡಿಟ್ ಬ್ಯೂರೋಗಳು ಸ್ವಲ್ಪ ಭಿನ್ನವಾದ ಸ್ಕೋರಿಂಗ್ ಮಾದರಿಗಳನ್ನು ಬಳಸುವುದರಿಂದ, ಯಾವ ಕ್ರೆಡಿಟ್ ಬ್ಯೂರೋ ನಿಮ್ಮ ಕ್ರೆಡಿಟ್ ರಿಪೋರ್ಟ್ ಅನ್ನು ತಯಾರಿಸಿದೆ ಎಂಬುವುದನ್ನು ಆಧರಿಸಿ ನಿಮ್ಮ ಸ್ಕೋರ್ ಸ್ವಲ್ಪ ಬದಲಾಗಬಹುದು.

ನೀವು ಯಾವುದೇ ಕ್ರೆಡಿಟ್ ಸ್ಕೋರ್ ಅನ್ನು ಹೊಂದದೇ ಇರಬಹುದೇ?

ನೀವು ಹಿಂದೆಂದೂ ಕ್ರೆಡಿಟ್ ಕಾರ್ಡ್ ಬಳಸದೆ ಇದ್ದು ಯಾವುದೇ ಸಾಲವನ್ನು ಪಡೆಯದೇ ಇದ್ದರೆ, ನಿಮ್ಮ ಬಳಿ ಯಾವುದೇ ಕ್ರೆಡಿಟ್ ಹಿಸ್ಟರಿ ಇರುವುದಿಲ್ಲ. ನಿಮ್ಮ ಸ್ಕೋರ್ ಅನ್ನು ನಿರ್ಧರಿಸಲು ಕ್ರೆಡಿಟ್ ಸ್ಕೋರಿಂಗ್ ಮಾದರಿಗಳು ಈ ಮಾಹಿತಿಯನ್ನು ಬಳಸುವುದರಿಂದ, ಅವರಿಗೆ ಸ್ಕೋರ್ ಅನ್ನು ತಯಾರಿಸಲು ಆಗುವುದಿಲ್ಲ.

ನಿಮ್ಮ ಸಿಬಿಲ್ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಅದನ್ನು ಸುಧಾರಿಸುವುದು ಹೇಗೆ?

ಒಂದು ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿರುವುದು ಮಹತ್ವಪೂರ್ಣವಾಗಿರುವುದರಿಂದ, ನೀವು ನಿಮ್ಮ ಸಿಬಿಲ್ ಸ್ಕೋರ್ ಅನ್ನು ಸುಧಾರಿಸಲು ಕೆಲವು ವಿಧಾನಗಳನ್ನು ಇಲ್ಲಿ ನೀಡಲಾಗಿದೆ:

  • ನಿಮ್ಮ ಸ್ಥಿತಿಯೇನು ಎಂದು ನಿಖರವಾಗಿ ತಿಳಿದಿರಲು ಆಗಾಗ್ಗೆ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುತ್ತಿರಿ, ಇದರಿಂದ ಯಾವುದೇ ತಪ್ಪುಗಳಿದ್ದಲ್ಲಿ ಶೀಘ್ರವೇ ಅದನ್ನು ತಿದ್ದಬಹುದು.
  • ನಿಮ್ಮ ಇಎಂಐ ಹಾಗೂ ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನೂ ನಿಯಮಿತವಾಗಿ ಸರಿಯಾದ ಸಮಯದಲ್ಲಿ ಪಾವತಿಸಿರಿ; ಯಾವುದೇ ರೀತಿಯ ಬೇಪಾವತಿ ಅಥವಾ ವಿಳಂಬಗಳನ್ನು ತಪ್ಪಿಸಿ.
  • ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಅತಿಯಾಗಿ ಬಳಸಬೇಡಿ, ನಿಮ್ಮ ಸಾಲದ ಬಳಕೆಯನ್ನು 30%ಕ್ಕಿಂತ ಕಡಿಮೆ ಇಡಿ.
  • ಅಲ್ಪಾವಧಿಯಲ್ಲಿ ಹಲವು ಸಾಲಗಳಿಗೆ ಅಥವಾ ಕ್ರೆಡಿಟ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸುವುದನ್ನು ತಪ್ಪಿಸಿ.
  • ನಿಮ್ಮ ಹಳೆಯ ಕ್ರೆಡಿಟ್ ಕಾರ್ಡ್ ಗಳನ್ನು ರದ್ದುಪದಿಸಬೇಡಿ - ಇದು ನೀವು ಹೊಣೆಗಾರ ಕ್ರೆಡಿಟ್ ಹಿಸ್ಟರಿ ಹೊಂದಿರುವಿರಿ ಎಂದು ಸಾಲದಾತರಲ್ಲಿ ವಿಶ್ವಾಸವನ್ನು ತುಂಬುತ್ತದೆ.